ನಿಶಾಚರಿ(Nishaachari)- Yashas Nagar

ನಿಶಾಚರಿ

ರಾತ್ರಿಶಿಫ್ಟಿನ ಕಣ್ಣು

ಕೆಂಪುದೀಪದ ಮೇಲೆ

ವಯಸ್ಸು ಮೂವತ್ತು ದಾಟಿಲ್ಲ, ಶುಗರ್ ಹತ್ತಿರ ಬಂದಿಲ್ಲ

ಮಂಡೆಪೂರ ಮಂಡಿನೋವು, ಕನಸಿಗೆ ಬಾವು

ಇವತ್ತಲ್ಲ ನಾಳೆ ಸೂರ್ಯನ ಹಲ್ಲುದುರಿಸುವೆ

ಅಡ್ಡಾಡೋಕೆ ಹತ್ತನೇ ಅಂತಸ್ತೇ ಬೇಕಾ!

ಹಳಸುವಾಸನೆ ಡಬ್ಬಿ, ಅರ್ಧಹೊಟ್ಟೆಯ ಬಾಟಲಿ

ಕೆಲಸಕ್ಕೆ ಬಾರದ ಕಡತ, ಕೈಮುರಿದ ಬೆಂಕಿಕಡ್ಡಿ

ಜೀವ ವಜೆಯಾದವರಿಗೆ ಇದೂ ಮಂದರವೇ, ಏನೀಗ!

21...20...19...

ಕೆಳಗಿಳಿಯುವ ಲಿಫ್ಟಿಗೂ

ಶುಕ್ರಶಿಷ್ಯರ ಕಂಡರೆ ಸಸಾರ

ಏಸಿಯಿದ್ದರೂ ಕಾಯುವಿಕೆಯ ಬಾಣಲೆ

"This is absurd! ಇವತ್ತೇ ಬರತ್ತಾ ಸಾರ್ ಏನ್ ಕತೆ!"

ಕಾಫಿಗೋ, ಡ್ರಿಂಕ್ಸಿಗೋ, ಚಾಟಿಗೋ,

ಇಲ್ಲಾ ಜಾತಕಕ್ಕೆ ಒದಗಬಹುದಾದ

ಹೆಣ್ಣುಮಗಳಾದರೆ ಒಂದು ಲೆಕ್ಕ

ಇವನ್ಯಾರೋ ಐಡಿ ತಿರುಗಿಸುತ್ತ ಗಡ್ಡ ಕೆರೆದವ

ತಲೆಯಲ್ಲಾಡಿಸುವ ಕರ್ಮ ನನಗಿಲ್ಲ

ಕಾಲುನವೆಗಿಂತ ಔಪಚಾರಿಕ ನಗೆ irritation

ಗಾಡ್! ಗಾಡೋ!

ಎಂಟಕ್ಕೇ ನೆಗೆದುಬಿದ್ದ ಹಾಗಿದೆ ನಾರದನ ಅಪರಾವತಾರ

ಸಿಗರೇಟು ಹಚ್ಚುವಂತಿಲ್ಲ(ಏನೋ ಸೆನ್ಸರ್ ಅಂತೆ)

ಬ್ಯಾಗಲ್ಲಿದೆಯೋ ಇಲ್ಲವೋ ನೆನಪಿಲ್ಲ

ಸುಖದ ಯಜ್ಞಕ್ಕೂ ಜೀತದ ಬೇಲಿ

ಮಾಂಸದ ಮುದ್ದೆಗೆ ತುಪ್ಪ ಒರೆಸಿ

ಕೈಲಾದಷ್ಟು ಬಿಸಾಕುವ ಹುಂಬತನ

ತಡೆಯಲು ಕೋದಂಡ ಬಂದರೆ ಬರಲಿ

ಹೆಚ್ಚೆಂದರೆ ಸಮುದ್ರದಾಚೆಗೆ ತಾನೇ

ಹಾರಲಿ, ಮೋಹನನ ಕಲ್ಪನೆಯಿಂದಾಚೆಗೆ

ಬೀಳಲಿ, ಸಂಸ್ಕಾರದ ಗಡಿಯಿಂದಾಚೆಗೆ

ಮಣ್ಣಾಗಲಿ, ಮಲೆಗಳ ಮತ್ತೊಂದಾಚೆಗೆ

18..17..16..

ಫೋನು ತಿವಿದ ಹಾಗಾಯಿತು, ಹಾಳುಭ್ರಮೆ

ಆಫೀಸು ಗ್ರೂಪು ಹೊದ್ದು ಮಲಗಿರಬೇಕು

ನಾಳೆಯಿಂದ ಒಂದುವಾರ ಅಜ್ಞಾತವೆಂದು

ಮೆಸೇಜು ಹಾಕಿಬಿಡಲಾ!

ಬಟ್ಟೆ, ಬಣ್ಣ, ರೂಪ, ಎತ್ತರ ಇದೇ ಸಾಕು

ಸತ್ತಾತ್ಮಕ್ಕೊಂದು ಹೊಸತನದ ಥಳುಕು

ಅಷ್ಟೇ!

ಈ ಪುಣ್ಯಾತ್ಮನ ಗಡ್ಡ ಇನ್ನೂ ಮಾಸಿಲ್ಲ

ಅದೇ ನಗು-ಅದೇ ಸಮಾಧಾನ

Optimism is a pandemic

ಮತ್ತೆ ಕ್ಯಾಬಿನ್ ಒಳಹೋಗಿ ಅಂಡೂರುವೆ ಸಾಯಲಿ

ನಾಳಿನ ಕೆಲಸಕ್ಕೆ ಇವತ್ತೇ ಮುಹೂರ್ತ

ಕತ್ತಿ ಮಸೆದರಷ್ಟೇ ರಕ್ತ

ಬೆರಳು ಸಮೆದರಷ್ಟೇ ಶಕ್ತ

ಮನಸೆಲ್ಲ ಇಲ್ಲೇ ಇದ್ದಮೇಲೆ

ಬೋನಸ್ಸು ಮೈನಸ್ಸು ಹೇಗಾದೀತು!

"ಟಿಣ್! ನಿಮಗೂ ಕೇಳಿಸಿತಾ?"

ಬೇಡಿಕೆ ಕೇಳಿ ಬ್ರಹ್ಮನೇ ಇಳಿದಿರಬೇಕು

ಆರು ತಿಂಗಳ ನಿದ್ದೆ, ಆರು ತಿಂಗಳ ಊಟ ಬೇಕೆನ್ನಿಸಿದರೂ

ನಾಲಿಗೆಯ ಮೇಲೊಂದು ಮಲಗಬೇಡ ಸರಸು, ದಮ್ಮಯ್ಯ!

15..14..13...

ಥತ್!

ಸದ್ದುಮಾಡಿದ ಪೊಟ್ಟಣ

ಮೇಲೆಹೋಗುವುದಂತೆ

ಮತ್ತೆ ಗಣಿತದ ಪಾಠ, ಜ್ಯೋತಿಷ್ಯದಾಟ

ಕೆದರಿದ ಕೂದಲ ಸರದಾರ ಸೂತ್ರ ಬರೆವಾಗ

ಇಲ್ಲೇ ಮೊಳೆಹೊಡೆದು ಕೂತ ಗುರುತು

ಮುಳ್ಳು ತಿರುಗುವುದು ಅನುಮಾನ

ಚುಚ್ಚುವುದೊಂದೇ ತೀರ್ಮಾನ

ರುದ್ರಾಕ್ಷಿ ಹಿಡಿದು, ಚಕ್ಕಳ ಬಲಿದು

ಹಿರಣ್ಯನಾಗುವುದೊಂದೇ ದಾರಿ

ಹುತ್ತ ಮೈಬೆಚ್ಚಗಿರಿಸೀತು, ಅಪ್ಸರೆಯ ಗೆಜ್ಜೆ ಮ್ಯೂಟಾದೀತು

ಒಳಗೂ ಅಲ್ಲ-ಹೊರಗೂ ಅಲ್ಲ

ರಾತ್ರಿಯೂ ಅಲ್ಲ-ಬೆಳಗೂ ಅಲ್ಲ

ಅಬ್ಬೇಪಾರಿ ಬದುಕು

ತೀಡೋ ಉಗುರು ಮಾತ್ರ ಹರುಕು-ಮುರುಕು

12..11..10..

ಸಾವಿರ ವರ್ಷದ ತಪಕೆ

ಕೊನೆಗೂ ಬಾಗಿಲು ಸರಿಯಿತಪ್ಪ!

ವಿಶೇಷವೇನಿಲ್ಲ ಬಿಡಿ

ಮೇಲೆ ಹೋದ ಹಾಗೇ ಕೆಳಗೂ ಹಾದಿ

ಕೆಳಬಂದಮೇಲೆ ಮತ್ತೆ ನೆಲವೇ ಆದಿ

ಅದೇ ಸಂಖ್ಯೆ,

ಅದೇ ಲೈಟು,

ಗಿಜಿಗುಡುವ ಕೊಟ್ಟಿಗೆಯಲಿ ಅದೇ ಸಗಣಿಸೆಂಟು

ಮೆಸೇಜು ಬಂದಿರಬೇಕು

ಮತ್ತೆ ಮೇಲೇರಬೇಕೇನೋ!

1..2..3..