ನೆಲ ದೇವತೆ ಮಾತು- Gowthami M

ನೆಲ ದೇವತೆ ಮಾತು.

ನಾನೆಂದೂ ಗುಡಿ ಗೋಪುರಗಳ ಹಂದರ ಕೇಳಲಿಲ್ಲ.

ನಾನೆಂದೂ ಕುರಿಮರಿ, ಕೋಳಿಗಳ ಬಲಿ ಬೇಡಲಿಲ್ಲ.

ನಾನೆಂದೂ ಆಭರಣಗಳ ಉತ್ಸವ ಮೂರ್ತಿ ಬೇಕೆನ್ನಲಿಲ್ಲ.

ನಾನೆಂದೂ ಪಲ್ಲಕ್ಕಿ ಮೆರವಣಿಗೆ ಮಾಡೆನ್ನಲಿಲ್ಲ.

ನನ್ನನು ನಾಲ್ಕು ಗೋಡೆಗಳ‌ ಗೋಪುರದಲ್ಲಿ ,

ಉಸಿರು ಕಟ್ಟಿಸುವ ಧೂಪದ ಮಧ್ಯೆ ಸಿಲುಕಿಸಿ,

ರಕ್ತದ ಹೊಳೆ ಹರಿಸಿ,

ನನ್ನನ್ನು ಅಪರಾಧಿ ಭಾವ ಕಾಡುವಂತೆ ಮಾಡಿದಿರಿ.

ಯಾರಿಗಾಗಿ ಇವೆಲ್ಲ? ನನಗಾಗಿಯೇ ,ನಿಮಗಾಗಿಯೇ?.

ನಾನು ಬಸವಣ್ಣನ ಕಾಯಕದಲ್ಲಿದ್ದೆನೆ.

ಅಕ್ಕಮಹಾದೇವಿಯ ಧೃಡ ಭಕ್ತಿಯಲ್ಲಿದ್ದೆನೆ‌.

ಭಕ್ತಿಯಿಂದ ನೆನೆಯುವವರ ಮನದಲ್ಲಿದ್ದೆನೆ.

ಅಂಧಕಾರದ ಕ್ರೌರ್ಯ ತೊಲಗಿಸುವ ದಿವ್ಯ

ಜ್ಯೋತಿಯಲ್ಲಿದ್ದೆನೆ.

ಹೆಣ್ಣನ್ನು ಪೂಜಿಸುವ ಸ್ಥಳದಲ್ಲಿದ್ದೆನೆ.

ನಾ ಇಲ್ಲದ ಕಡೆ ನೀವೇಕೆ ಹುಡುಕುವಿರಿ?

ನಾ ಸ್ಪರ್ಶಿಸಲಾಗದ ಸರ್ವಾಂತರರ್ಯಾಮಿ .

ನನ್ನನು ಕಂಡರೆ ಎಲ್ಲರಿಗೂ ಎಲ್ಲಿಲ್ಲದ ಭಕ್ತಿ ಭಾವ .

ಆದರೆ ನನ್ನ ನೆಲದ ಹೆಣ್ಣು ಮಕ್ಕಳ ಮೇಲೆ

ಯಾಕೆ ಶೋಷಣೆಯ ಕಿಡಿ??.

ಸೃಷ್ಟಿಯ ಮೂಲ ಆಧಿಶಕ್ತಿಯು ನಾನೇ,

ಜ್ಞಾನದಿಂದ ಮುನ್ನಡೆಸುವ ಸರಸ್ವತಿಯು ನಾನೇ,

ಸಂಪತ್ತು ನೀಡಿ, ಸನ್ನ್ಮಾರ್ಗದಲ್ಲಿ ನಡೆಸುವ ಲಕ್ಷ್ಮಿಯು ನಾನೇ,

ಸೃಷ್ಟಿಯ ವಿನಾಶ ಮಾಡುವ ಕಾಳಿಯು ನಾನೇ,

ನಾನೇ ಆಧಿ, ನಾನೇ ಅಂತ್ಯ,ಸಕಲವು ನಾನೇ.

ನನಗೂ ಈ ನೆಲದ ಹೆಣ್ಣು ಮಕ್ಕಳಿಗೂ

ಇರುವ ವ್ಯತ್ಯಾಸವಾದರು ಏನು?

ನಾ ಕಾಣದಿದ್ದರೂ ಸರ್ವಂತಾರಯಾರ್ಮಿ.

ಅವರು ಕಾಣುವ ಸರ್ವಶಕ್ತೆ ಯರು.

ಸೃಷ್ಟಿಯ ಪ್ರತಿರೂಪ ಈ ನೆಲದ ಹೆಣ್ಣು.