ವೈಭವದ ವೈಖರಿಯ ಎಲ್ಲ ನೋಡಬಯಸುವರು
ಸರಳತೆಯ ಆದರಿಸಿ,
ಸತ್ಕರಿಸುವರು ಯಾರು?
ಇಂಪಾಗಿ ಹರಿದಾಡುವ ಧ್ವನಿಗೆ
ಹಲವಾರು ಶ್ರಾವಕರು
ಅತ್ತಾಗ ಒಡೆಯುವ ದನಿಯ
ಮನಕೊಟ್ಟು ಆಲಿಸುವರಾರು?
ಯಶಸ್ಸಿನ ಕುಲುಮೆಯ ಬಳಿ
ದುಂಬಾಲು ಬಿದ್ದು ಬರುವ ಗುಂಪುಗಳೇ ಹೆಚ್ಚಿನವು
ಸೋಲಿನ ಸ್ಮಶಾನ ಮೌನದಲಿ ಕೈ ಹಿಡಿಯುವರಾರು?
ಸೌಂದರ್ಯಕೆ ಪ್ರತಿ ಹೆಜ್ಜೆಯಲ್ಲೂ ಕಿಕ್ಕಿರಿಯುವ ಪ್ರಶಂಸಕರು
ಶೃಂಗಾರದ ಪರದೆ ಹಿಂದಿರುವ ವೆಕ್ತಿತ್ವವದ
ಮೌಲ್ಯವ ಅರಿತವರು ಯಾರು?
ಹಣಕಾಸಿನರಮನೆಯು ಪರಗತಿಯಾ ಸಂಕೇತ.
ಪ್ರಾಮಾಣಿಕವಾಗಿ ಶ್ರಮಿಸುವ ಆ ನಿವಾಸಿ
ಹೃದಯಗಳ ವೈಶಾಲ್ಯತೆಯ ಅಳೆದವರು ಯಾರು?
ಹಸಿರು ಹೊಲ ಗದ್ದೆಯಲಿ ವರುಣನಾ ಜಲಧಾರೆ
ಬರಡುಭೂಮಿಯತ್ತ ತಿರುಗಿ ಹನಿ ನೀರು ನೀಡಿ
ಅದರ ದಾಹವ, ನೀಗಿಸುವರಾರು?
ವ್ಯಂಗ್ಯವೆನಿಸುವ ಈ ಜೀವನದ ಒಗಟುಗಳ
ಸೂಕ್ಷ್ಕ್ಮರೂಪಿಯಾಗಿ ಬಗೆಹರಿಸುವರು ಯಾರು?