ಕಾಡುಮಲ್ಲಿಗೆ | Indira Lokesh

ಕವನದ ಶೀರ್ಷಿಕೆ : ಕಾಡುಮಲ್ಲಿಗೆ

ಕಾಡು ಮಲ್ಲಿಗೆ ನಾನು

ನಾಡಿಗ್ ಹ್ಯಾಂಗ್ ಬರಲಿ

ಬರಲೊಲ್ಲೇ ನಾ

ಕಾಡು ಬಂಧವ ತೊರೆದು

ನಾಡಿಗರ ಹಂಗಿನೊಳಗೆ //1//

ಸುರಗಿ,ಸಂಪಿಗೆ, ಸೇವಂತಿಗೆಯರ

ಒಲವಿನಕ್ಕರೆಯ ತೊರೆದು

ಕೇದಿಗೆ,ಮರುಗ,ಪಚ್ಚೆಯರ

ವಾತ್ಸಲ ಬಂಧವ ತೊರೆದು

ಬರಲೊಲ್ಲೇ ನಾ

ಕಾಡು ಬಂಧವ ತೊರೆದು

ನಾಡಿಗರ ಹಂಗಿನೊಳಗೆ//2//

ಸುಗಂಧರಾಜನ ಪ್ರೀತಿಯ

ಸುಗಂಧ ಬಂಧವ ತೊರೆದು

ಸೂರ್ಯಕಾಂತಿಯ

ಸ್ನೇಹ ಬಂಧವ ತೊರೆದು

ತಾವರೆ, ನೈದಿಲೆಯರ

ಬೆಳದಿಂಗಳ ತಂಪ ತೊರೆದು

ಬರಲ್ಲೊಲ್ಲೇ ನಾ

ಕಾಡು ಬಂಧವ ತೊರೆದು

ನಾಡಿಗರ ಹಂಗಿನೊಳಗೆ//3//

ನಗರ ದೇವರ ಮುಡಿ

ಏರುವಾಸೆ ಎನಗಿಲ್ಲ

ಕಾಡು ಮಲ್ಲಯ್ಯನ

ಪಾದವೇ ಸಾಕೆನಗೆ

ಮುಡಿಯ ಬಂಧದ

ಗೊಡವೆ ಬೇಡೆನಗೆ

ಬರಲೊಲ್ಲೇ ನಾ

ಕಾಡು ಬಂಧವ ತೊರೆದು

ನಾಡಿಗರ ಹಂಗಿನೊಳಗೆ//4//

ಹೊಂಗೆಯಾಸರೆ ಸಾಕೆನಗೆ

ಹಂಗಿನರಮನೆ ಬೇಡೆನಗೆ

ಹಂಗತೊರೆವಾಸೆ ಎನಗೆ

ಬರಲೊಲ್ಲೇ ನಾ

ಕಾಡು ಬಂಧವ ತೊರೆದು

ನಾಡಿಗರ ಹಂಗಿನೊಳಗೆ//5//